ಇದು ರಕ್ತ ಶುದ್ಧಿ ಮಾಡಿ, ರಕ್ತ ವೃದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಟಿಯನ್ನು ಕೊಡುವುದು. ನಿಶ್ಶಕ್ತಿಯನ್ನು ನೀಗುವುದು ಹಾಗೂ ಗೆಲ್ಲುವ ಶಕ್ತಿಯಿದೆ. ಈ ವನೌಷಧಿ ಸೇವನೆಯಿಂದ ಸಂವೋಹಕಾರಿ ಚಿತ್ತ ಚಂಚಲತೆ, ಗಾಬರಿ ದೂರವಾಗುವುವು. ಮಕ್ಕಳಿಗೆ ಪುಷ್ಟಿ ನೀಡಿವುದು, ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ, ಸ್ಫೂರ್ತಿ ಮತ್ತು ಯೌವನವನ್ನು ಕೊಡುವುದು. ಸ್ತ್ರೀಯರ ಮುಟ್ಟಿನ ದೋಷಗಳು: ಶುದ್ಧಿ ಮಾಡಿದ ಅಶ್ವಗಂಧ ಚೂರ್ಣ ಲೋದ್ರ ಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆ ಚೂರ್ಣ ಸಮ ಭಾಗ ಸೇರಿಸಿ, ಹೊತ್ತಿಗೆ 2.50 ಗ್ರಾಂ ಸೇವಿಸಿ, ಮೇಲೆ ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲು ಒಂದು ಲೋಟ ಸೇವಿಸಿವುದು. ಈ ರೀತಿ ದಿನಕ್ಕೆ ಬೆಳಿಗ್ಗೆ ಸಾಯಂಕಾಲ ಎರಡು ಬಾರಿ ಸೇವಿಸುವುದು. ಈ ಔಷಧಿಯನ್ನು ಸೇವಿಸುವ ಅವಧಿಯನ್ನು ನಿರ್ಮಲಚಿತ್ತ, ಶಾಂತ ಸ್ವಭಾವ ಮತ್ತು ಶುಭಯೋಚನೆಗಳಿರಲಿ. ಇದರಿಂದ ಮಾನಸಿಕ ಚಂಚಲತೆ ಜೀವನದಲ್ಲಿ ಜಿಗುಪ್ಸೆ ಶಮನವಾಗುವುವು.
ಪುಷ್ಟಿ ಮತ್ತು ಶಕ್ತಿಗಾಗಿ: 100 ಗ್ರಾಂ ಅಶ್ವಗಂಧ ಬೇರನ್ನು ತಂದು ಹಾಲಿನಲ್ಲಿ ಬೇಯಿಸಿ ಶುದ್ಧ ಮಾಡಿ ಒಣಗಿಸಿ ಚೂರ್ಣಿಸಿ, ಗಾಜಿನ ಭರಣಿಯಲ್ಲಿಡುವುದು. ಸಮ ಪ್ರಮಾಣ ಸಕ್ಕರೆ ಸೇರಿಸಿ ಹೊತ್ತಿಗೆ 5 ಗ್ರಾಂ ನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಬೆರೆಸಿದ ಹಾಲನ್ನು ಪಾನ ಮಾಡುವುದು. ನೋವು ಮತ್ತು ಬಾವುಗಳು: ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುವುದು. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು.
ಪ್ರಜ್ವಲ ದೃಷ್ಟಿಗೆ: ಅಶ್ವಗಂಧ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಅಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಬೇಕು. ದೃಷ್ಟಿದೋಷಗಳು ನಿವಾರಣೆ ಆಗಿ ಕಣ್ಣು ದೃಷ್ಟಿ ಪ್ರಜ್ವಲವಾಗುವುದು. ಕಣ್ಣುಗಳನ್ನು ತ್ರಿಫಲ ಚೂರ್ಣದ ನೀರಿನಲ್ಲಿ ತೊಳೆಯುವುದು. ವೃದ್ಧಾಪ್ಯದ ದೌರ್ಬಲ್ಯತೆಗೆ ಮತ್ತು ಶಕ್ತಿಗೆ: ಅಶ್ವಗಂಧದ ಬೇರುಗಳನ್ನು ಹಾಲಿನಲ್ಲಿ ಶುದ್ಧ ಮಾಡಿ ಒಣಗಿಸಿ ಚೂರ್ಣ ಮಾಡಿ, ಶೋಧಿಸಿಟ್ಟುಕೊಳ್ಳುವುದು, ಹೊತ್ತಿಗೆ ಎರಡೂವರೆ ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಸೇರಿಸಿದ ಹಾಲನ್ನು ಕುಡಿಯುವುದು.
ಗರ್ಭಧಾರಣೆ: ಕೆಲವು ಕಾರಣಗಳಿಂದ ಸ್ತ್ರೀಯರಿಗೆ ಸಂತಾನವಿರುವುದಿಲ್ಲ. ದೋಷಗಳು ಸ್ತ್ರೀ ಪುರುಷರಿಬ್ಬರದು ಇರಬಹುದು. ಆದುದರಿಂದ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸ್ತ್ರೀ ಪುರುಷರಿಬ್ಬರೂ ಸೇವಿಸಬಹುದು. ಭಗವಂತನ ದಯೆಯಿಂದ ಮಕ್ಕಳಾಗುವವು. ಹಾಲು, ಅನ್ನ ಮತ್ತು ಮಧುರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು.
ಬಂಜೆತನ ದೂರವಾಗಲು: 25 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕಾಯಿಸುವುದು. ಅಷ್ಟಾಂಷ ಕಷಾಯ ಮಾಡಿ ಇಟ್ಟುಕೊಳ್ಳುವುದು. ಮುಟ್ಟಿನ ಸ್ನಾನದ ನಂತರ 4 ಟೀ ಚಮಚ ಕಷಾಯವನ್ನು ಹಸುವಿನ ಹಾಲಿಗೆ ಸಕ್ಕರೆ, ತುಪ್ಪವನ್ನು ಸೇರಿಸಿ ಸೇವಿಸುವುದು. ಹೀಗೆ ಮೂರು ಮುಟ್ಟಿನಲ್ಲಿ ಕ್ರಮವಾಗಿ ಮಾಡುವುದು. ಹಳೆಯ ಅಸಾಧ್ಯ ಜ್ವರ ಇದ್ದಾರೆ: 30 ಗ್ರಾಂ ಅಮೃತಬಳ್ಳಿಯ ಸತ್ವಕ್ಕೆ 40 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸೇರಿಸಿಟ್ಟುಕೊಳ್ಳುವುದು. ಒಂದು ವೇಳೆಗೆ ಎರಡೂವರೆ ಗ್ರಾಂನಷ್ಟು ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿವುದು.
ಗಂಡಸರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ನೀಡುತ್ತದೆ: ಕೆಲವು ವೇಳೆ ಗಂಡಸರ ವೀರ್ಯದಲ್ಲಿ ವೀರ್ಯಾಣುಗಳು ಇರಲೇಬೇಕಾದ ಸಂಖ್ಯೆಗಿಂತ ಕಡಿಮೆಯಿರುವುವು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಾಗುವುದಿಲ್ಲ. ಅಶ್ವಗಂಧ ವಿದಾರಿಕಾಂಡ ನೆಗ್ಗಿಲು ಮತ್ತು ಕಾಮೆ ಬೀಜಗಳಿಗೆ ಚೂರ್ಣವನ್ನು ಸೇರಿಸಿ, ತಜ್ಞರ ಮೇಲ್ವಿಚಾರಣೆಯಲ್ಲಿ ಜೇನುತುಪ್ಪ ಸೇರಿಸಿ ಸೇವಿಸಬೇಕು. ಹೀಗೆ ಒಂದೆರಡು ತಿಂಗಳು ಮಾಡುವುದು ಹಾಗೂ ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿ ಫಲಿತಾಂಶವನ್ನು ಗಮನಿಸುವುದು. ನೈಸರ್ಗಿಕ ರೀತಿಯಲ್ಲಿ ದೋಷ ಪರಿಹಾರವಾಗಿ ಮಕ್ಕಳಾಗುತ್ತವೆ.
ಬೆನ್ನು ನೋವಿಗೆ: 10 ಗ್ರಾಂ ಶುದ್ಧಿ ಮಾಡಿದ ಅಶ್ವಗಂಧದ ನಯವಾದ ಪುಡಿ ಮತ್ತು 10ಗ್ರಾಂ ಕೆಂಪು ಕಲ್ಲುಸಕ್ಕರೆ ಪುಡಿಯನ್ನು ಒಂದು ಬಟ್ಟಲು ಬಿಸಿ ಹಾಲಿನಲ್ಲಿ ಸೇರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಅಶ್ವಗಂಧದ ಎಲೆಗಳಿಗೆ ಎಳ್ಳೆಣ್ಣೆ ಸವರಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು. ಪ್ರತಿ ದಿವಸ ಎರಡು, ಮೂರು ಸಾರಿ ಈ ರೀತಿ ಮಾಡುವುದು.