ಸಂತಾನ ಫಲ ನೀಡುವ ಮತ್ತು ಪ್ರೇಮ ವೈಫಲ್ಯಕ್ಕೆ ಪರಿಹಾರ ನೀಡುವ ಈ ಹೊಳೆ ಆಂಜನೇಯ ಸ್ವಾಮಿ ಬಗ್ಗೆ ಒಂದಿಷ್ಟು ಮಾಹಿತಿ.!

Hit

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಮಂಡ್ಯ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರ ಹೊಳೆ ಆಂಜನೇಯ ಎಂದೇ ಪ್ರಸಿದ್ಧಿ ಪಡೆದಿದೆ. ಶ್ರಿಪಾದರಾಜರು ಮತ್ತು ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂದು ಎನ್ನಲಾಗಿದ್ದು, ಈ ಕಾರಣದಿಂದಾಗಿ ಈ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ. ವ್ಯಾಸರಾಜರು ಮತ್ತು ಅವರ ವಿದ್ಯಾಗುರುಗಳಾದ ಶ್ರಿಪಾದರಾಜರು ದೇಶದ ಉದ್ದಗಲದಲ್ಲಿ 732 ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರು ಎಂದು ಹೇಳಲಾಗಿದೆ. ಪ್ರತಿ ದಿನ ನೂರಾರು ಜನ ಭಕ್ತರು ಹೊಳೆ ಆಂಜನೇಯನ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.

ಭಕ್ತರ ಅಭೀಷ್ಟಗಳನ್ನು ಹೊಳೆ ಆಂಜನೇಯ ನೆರವೇರಿಸುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಈ ದೇವಸ್ಥಾನ ಸುಮಾರು 550 ವರ್ಷಗಳ ಹಿಂದೆ ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾಯಿತು ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಪ್ರಾಣ ದೇವರು ಜಾಗೃತನಾಗಿ ನೆಲೆಸಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

ಇಲ್ಲಿನ ಆಂಜನೇಯನ ಮೂರ್ತಿ ಆಕರ್ಷಣೀಯವಾಗಿದೆ. ಆಂಜನೇಯನು ರಾಮಾಯಣ ಕಾಲದಲ್ಲಿ ಹನುಮನಾಗಿ, ಮಹಾಭರತ ಕಾಲದಲ್ಲಿ ಭೀಮನಾಗಿ ಮತ್ತು ಕಲಿಯುಗದಲ್ಲಿ ಮದ್ವಾಚಾರ್ಯರಾಗಿ ಅವತಾರ ಎತ್ತಿದನೆಂದು ಹೇಳಲಾಗಿದೆ. ಇಲ್ಲಿರುವ ಹನುಮನ ಮೂರ್ತಿಯ ಎರಡು ಬೆರಳು ಉದ್ದ ಇವೆ.

ಇವು ಮಧ್ವಚಾರ್ಯರು ಪ್ರತಿಪಾದಿಸಿರುವ ದ್ವೈತ ಸಿದ್ಧಾಂತವನ್ನು ಸಂಕೇತಿಸುತ್ತವೆ. ಆಂಜನೇಯ ತನ್ನ ಕೈಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದುಕೊಂಡಿರುವುದು ಭೀಮನ ಅವತಾರವನ್ನು ಪ್ರತಿನಿಧಿಸುತ್ತದೆ. ಬಾಲದಲ್ಲಿ ಗಂಟೆ ಇದೆ. ಆಂಜನೇಯನ ಹನುಮನ ತಲೆಯ ಭಾಗದಲ್ಲಿ ಸೂರ್ಯ, ಚಂದ್ರರಿದ್ದಾರೆ. ಇಲ್ಲಿನ ಆಂಜನೇಯನಿಗೆ ಜುಟ್ಟು ಇದೆ.

ಆಂಜನೇಯನ ಶಿಲಾ ಮೂರ್ತಿ ಪ್ರತಿ ವರ್ಷ 6 ರಿಂದ 7 ಇಂಚು ಬೆಳೆಯುತ್ತದೆ ಎಂದು ಜನರು ನಂಬಿದ್ದಾರೆ. ದೇವಸ್ಥಾನದ ಅರ್ಚಕ ಪ್ರದೀಪ್ ಹೇಳುವಂತೆ 2004ರಲ್ಲಿ ರಾಮನವಮಿಯ ದಿನದಂದು ದೇವಸ್ಥಾನ ಬಾಗಿಲು ಹಾಕಿದ್ದರೂ ಒಳಗಿನಿಂದ ಶಂಖ, ಜಾಗಟೆ, ನಗಾರಿಯ ಶಬ್ಧ ಕೇಳಿದ ಅನುಭವ ಅನೇಕರಿಗೆ ಆಗಿದೆ. ಈ ವರ್ಷದ ಚಂದ್ರಗ್ರಹಣ ಸಮಯದಲ್ಲಿ ದೇವಸ್ಥಾನ ಬಾಗಿಲು ಮುಚ್ಚಿದ್ದ ಸಂದರ್ಭದಲ್ಲೂ ಒಳಗಿನಿಂದ ಶಂಖ ಹಾಗೂ ಜಾಗಟೆ ಬಾರಿಸಿದ ಶಬ್ಧ ಬಂದಿತ್ತು ಎಂದು ಹೇಳುತ್ತಾರೆ.

ಈ ಕ್ಷೇತ್ರದಲ್ಲಿ ನಡೆಯುವ ಪೂಜೆಯೂ ವಿಶಿಷ್ಟವಾದದು. ಇಲ್ಲಿ ಪೂಜೆಗೆ ಬರುವ ಭಕ್ತರಿಗೆ ಅರ್ಚಕರು 1.25 ರೂಪಾಯಿ ಕೊಡುತ್ತಾರೆ. ಅದನ್ನು ಭಕ್ತಿಯಿಂದ ಸ್ವೀಕರಿಸಿ ಸಂಕಲ್ಪ ಮಾಡಿಕೊಂಡು ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಇಲ್ಲಿನ ಆಂಜನೇಯನಿಗೆ ಪೂಜೆ ಸಲ್ಲಿಸಿದರೆ ಮದುವೆಗೆ ಇರುವ ಅಡ್ಡಿಗಳು ನಿವಾರಣೆ ಆಗುತ್ತವೆ. ಮಕ್ಕಳಿಲ್ಲದವರಿಗೆ ಸಂತಾನ ಫಲ ಸಿಗುತ್ತದೆ. ಹಣಕಾಸಿನ ವ್ಯಾಜ್ಯಗಳು ಬಗೆಹರಿಯುತ್ತವೆ. ಹೀಗಾಗಿ ಹೆಚ್ಚಿನ ಜನರು ಇಲ್ಲಿಗೆ ಬಂದು ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಪರಿಪಾಠವಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *