ನಂಜನಗೂಡಿನ ನಂಜುಂಡೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸಿ, ನಿಮ್ಮ ಜೀವನನ ಜಂಜಾಟದಿಂದ ಹೊರಬನ್ನಿ

ಜ್ಯೋತಿಷ್ಯ ಧಾರ್ಮಿಕ

ನಂಜನಗೂಡಿನ ಶ್ರೀ ಕಂಠೇಶ್ವರ ಸನ್ನಿಧಿ ‘ದಕ್ಷಿಣ ಕಾಶಿ’ ಎಂದೇ ಹೆಸರುವಾಸಿ. ಇದು ದಕ್ಷಿಣ ಭಾರತದ ಪ್ರಸಿದ್ಧ ಶಿವ ಕ್ಷೇತ್ರಗಳಲ್ಲಿ ಒಂದು. ಈ ದೇವಾಲಯವು ಮೈಸೂರಿನ ಸಮೀಪವಿರುವ ನಂಜನಗೂಡಿನಲ್ಲಿ, ಕಪಿಲ ನದಿಯತೀರದಲ್ಲಿದೆ. ಶಿವನು ಸಮುದ್ರ ಮಂಥನ ಸಮಯದಲ್ಲಿ ದೊರಕಿದ ಹಾಲಾಹಲವನ್ನು (ವಿಷ) ಕುಡಿದನೆಂದು, ಆದ್ದರಿಂದ ಈ ಕ್ಷೇತ್ರಕ್ಕೆ ವಿಷಕಂಠ, ಶ್ರೀ ನಂಜುಂಡೇಶ್ವರ ಎಂಬ ಹೆಸರು ಬಂದಿತೆಂದು ಪ್ರತೀತಿ ಇದೆ. ಇಲ್ಲಿ ಇರುವ ಮಣ್ಣಿಗೆ, ನೀರಿಗೆ ನಿವಾರಕ ಶಕ್ತಿಯಿದೆಯೆಂದು, ಕಾಯಿಲೆಗಳನ್ನು ವಾಸಿ ಮಾಡುವವನೆಂದೂ, ಭಾವರೋಗ ನಿವಾರಕನೆಂದು ಸಹ ಈ ದೇವರನ್ನು ಪೂಜಿಸಲಾಗುತ್ತದೆ.

ಶ್ರೀಕಂಠೇಶ್ವರ ದೇವಸ್ಥಾನ ವಿಶಿಷ್ಟ ವಾಸ್ತು ಶೈಲಿಗೆ ಹೆಸರಾಗಿದೆ. ದೇವಸ್ಥಾನ 424 ಅಡಿ ಉದ್ದ, 159 ಅಡಿ ಅಗಲವಿದೆ. ಕರ್ನಾಟಕದ ಅತ್ಯಂತ ಉದ್ದನೆಯ ದೇವಸ್ಥಾನ ಎಂಬ ಖ್ಯಾತಿ ಪಡೆದಿದೆ. ಮುಂಭಾಗದ ರಾಜಗೋಪುರದ ಎತ್ತರ 120 ಅಡಿಗಳು, ತಳಭಾಗ 53 ಅಡಿ ಅಗಲ ಹಾಗೂ 46 ಅಡಿಗಳಷ್ಟು ಉದ್ದವಿದೆ. ಗೋಪುರ ಏಳು ಅಂತಸ್ತುಗಳಲ್ಲಿದೆ.

ನಂಜನಗೂಡು ಪುರಾಣ ಕಾಲದಲ್ಲಿ ದಂಡಕಾರಣ್ಯವಾಗಿತ್ತು. ಶ್ರೀಕಂಠೇಶ್ವರ ಸ್ವಾಮಿ ಕೇಶಿ ಎಂಬ ರಾಕ್ಷಸನನ್ನು ಸಂಹಾರ ಮಾಡಿದಾಗ ಅವನ ದೇಹದಲ್ಲಿದ್ದ ವಿಷವು ಭೂಮಿಯಲ್ಲಿ ವ್ಯಾಪಿಸಿದ ಕಾರಣ ಈ ಪ್ರದೇಶಕ್ಕೆ ‘ಗರಳಪುರಿ’ ಕ್ಷೇತ್ರ ಎಂಬ ಹೆಸರಿತ್ತು.

ಕಪಿಲಾ ಮತ್ತು ಕೌಂಡಿನ್ಯ (ಗುಂಡ್ಲು ನದಿ) ನದಿಗಳ ಸಂಗಮ ಸ್ಥಳದ ದಂಡೆ ಮೇಲೆ ಶ್ರೀಕಂಠೇಶ್ವರ ದೇವಸ್ಥಾನವಿದೆ. ಇಲ್ಲಿ ವರ್ಷಕ್ಕೆ ಎರಡು ಸಲ ಜಾತ್ರೆ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ಸ್ವಾಮಿಯ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿ ಇದೆ. ಅನೇಕ ದೋಷಗಳ ಪರಿಹಾರಕ್ಕಾಗಿ ಜನರು ಶ್ರೀಕಂಠೇಶ್ವರನ ಸನ್ನಿಧಿಗೆ ಬರುತ್ತಾರೆ. ಏಕವಾರ ರುದ್ರಾಭಿಷೇಕ, ಕ್ಷೀರಾಭಿಷೇಕ,ಅಂಗಾರಕ ದೋಷ ಪರಿಹಾರಕ್ಕಾಗಿ ಪಾರ್ವತಿ ಹಾಗೂ ಶ್ರೀಕಂಠೇಶ್ವರನಿಗೆ ಎಳ್ಳು ಪೂಜೆ, ಪಂಚಾಮೃತ ಅಭಿಷೇಕ, ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ, ಶನಿ ದೇವರಿಗೆ ಎಳ್ಳು ದೀಪ ಹಚ್ಚುವ ಸೇವೆ, ನವಗ್ರಹ ಪೂಜೆ ಇತ್ಯಾದಿಗಳು ಇಲ್ಲಿ ನಿತ್ಯ ನಡೆಯುತ್ತವೆ.

ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಶ್ರೀಕಂಠೇಶ್ವರ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರಸ್ವಾಮಿ ಉತ್ಸವಗಳು ಪ್ರತ್ಯೇಕವಾದ ಪಂಚ ರಥಗಳಲ್ಲಿ ಜರುಗುತ್ತವೆ. ಈ ಬಗೆಯ ಐದು ರಥೋತ್ಸವಗಳು ಭಾರತದ ಬೇರಾವ ಭಾಗದಲ್ಲೂ ಕಂಡು ಬರುವುದಿಲ್ಲ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುವ ಚಿಕ್ಕಜಾತ್ರೆಯಲ್ಲಿ ಮೂರು ರಥಗಳ ಉತ್ಸವ ನಡೆಯುತ್ತದೆ.

ನಂಜನಗೂಡಿನಲ್ಲಿ ಪರಶುರಾಮ, ಚಾಮುಂಡೇಶ್ವರಿ, ಲಿಂಗಾಭಟ್ಟರ ಕಾಶಿ ವಿಶ್ವನಾಥೇಶ್ವರ, ರಾಘವೇಂದ್ರಸ್ವಾಮಿ ಮೂಲ ಮಠ, ಶಂಕರಮಠ, ಕನ್ನಿಕಾ ಪರಮೇಶ್ವರಿ, ಚಿಕ್ಕಯ್ಯನ ಛತ್ರದ ಪ್ರಸನ್ನ ನಂಜುಂಡೇಶ್ವರ ಹಾಗೂ ಕಪಿಲಾ ನದಿತೀರದಲ್ಲಿರುವ ಶಬರಿಮಲೆ ಮಾದರಿಯ ಅಯ್ಯಪ್ಪಸ್ವಾಮಿಯ ದೇವಸ್ಥಾನ ಸೇರಿ ಹಲವಾರು ದೇವಾಲಯಗಳು ನಂಜನಗೂಡಿನಲ್ಲಿವೆ.

ಭಕ್ತರಿಗೆ ದೇವಸ್ಥಾನದ ವತಿಯಿಂದ ನಿತ್ಯ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುತ್ತದೆ. ಶನಿವಾರ, ಭಾನುವಾರ ರಾತ್ರಿ ಮತ್ತು ಹುಣ್ಣಿಮೆಯ ಹಿಂದಿನ ರಾತ್ರಿ ಅನ್ನ ಸಂತರ್ಪಣೆ ನಡೆಯುತ್ತದೆ. ಭಕ್ತರೂ ಅನ್ನ ಸಂತರ್ಪಣೆಯ ಸೇವಾಕರ್ತರಾಗಲು ಅವಕಾಶವಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *