ಸಿಗಂದೂರು ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದೆ. ಕಾಡಿನಿಂದ ಆವೃತ್ತವಾದ ಸಿಗಂದೂರು ಸಣ್ಣ ಊರು. ಗಲಾಟೆ, ಗದ್ದಲಗಳಿಲ್ಲದ ಪ್ರಶಾಂತ ಸ್ಥಳ. ಸಾಗರ ಪೇಟೆಯಿಂದ 45 ಕಿ.ಮೀ. ದೂರದಲ್ಲಿದೆ. ಸಿಗಂದೂರು ಸಮೀಪ ತುಮರಿ ಎಂಬ ಊರಿದೆ.
ಸಿಗಂದೂರಿನ ಚೌಡೇಶ್ವರಿ ದೇವಿಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ ರಕ್ಷಿಸುವ ತಾಯಿ ಎಂದು ಜನರು ಚೌಡೇಶ್ವರಿಯನ್ನು ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಭಕ್ತರ ಮಹಾಪೂರ ಹರಿದು ಬರುತ್ತದೆ. ಶರಾವತಿ ಹಿನ್ನೀರಿನ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ಸೃಷ್ಟಿಯಾದ ನಡುಗಡ್ಡೆಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇವುಗಳ ಜತೆಗೆ ಈಗ ಚೌಡೇಶ್ವರಿಯಿಂದ ಸಿಗಂದೂರು ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ರಾಜ್ಯದ ಜನರ ಗಮನ ಸೆಳೆದಿದೆ.
ಯಾವ ಧಾರ್ಮಿಕ ಕ್ಷೇತ್ರದಲ್ಲೂ ಇಲ್ಲದ ವಿಶೇಷತೆ ಸಿಗಂದೂರಿನಲ್ಲಿದೆ. ಕಳ್ಳರಿಂದ ತಮ್ಮ ಮನೆ, ಹೊಲಗಳಿಗೆ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಪದ್ಧತಿ ಇದೆ. ಜಮೀನು, ತೋಟ, ಗದ್ದೆ, ಬೇಣ ಮತ್ತು ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ದೇವಿಯ ಕಾವಲಿದೆ ಎಂಬ ಬೋರ್ಡ್ ಹಾಕಿದರೆ ಅಲ್ಲಿ ಕಳ್ಳತನವಾಗುವುದಿಲ್ಲ ಎಂಬ ಪ್ರತೀತಿ ಇದೆ. ಹೀಗಾಗಿಯೇ ಇಂದಿಗೂ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೂಲೆ-ಮೂಲೆಗಳ ಊರುಗಳಲ್ಲಿ ‘ಸಿಗಂದೂರು ಚೌಡೇಶ್ವರಿ ದೇವಿಯ ಕಾವಲಿದೆ’ ಎಂಬ ಬೋರ್ಡ್‌ಗಳನ್ನು ಕಾಣಬಹುದು.
ಪ್ರತಿ ವರ್ಷ ಮಕರ ಸಂಕ್ರಾಂತಿ (ಜನವರಿ 14 ಅಥವಾ 15ರಂದು) ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಸಾವಿರಾರು ಜನ ಸೇರುತ್ತಾರೆ. ದೇವಸ್ಥಾನದಲ್ಲಿ ಅಭಿಷೇಕ, ಮಹಾಭಿಷೇಕ, ಪಂಚಾಮೃತ ಪೂಜೆ, ಅಲಂಕಾರ ಪೂಜೆಗಳು ನಡೆಯುತ್ತದೆ. ನಿತ್ಯ ಬೆಳಗಿನ ಜಾವದ 4.30ರಿಂದ ಬೆಳಿಗ್ಗೆ 7ರವರೆಗೆ, ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಮತ್ತೆ ಸಂಜೆ 6ರಿಂದ 7ರವರೆಗೆ ಪೂಜೆ ಮತ್ತು ದರ್ಶನಕ್ಕೆ ಅವಕಾಶವಿದೆ. ದೇವಸ್ಥಾನದ ನಿರ್ವಹಣೆಯನ್ನು ಚೌಡಮ್ಮದೇವಿ ದೇವಾಲಯದ ಧರ್ಮದರ್ಶಿ ರಾಮಪ್ಪ ನೋಡಿಕೊಳ್ಳುತ್ತಾರೆ. ಶೇಷಗಿರಿ ಭಟ್ಟರು ಇಲ್ಲಿನ ಪ್ರಧಾನ ಅರ್ಚಕರು.
ಮಾರ್ಗಸೂಚಿ: ಸಾಗರದಿಂದ ಆವಿನಹಳ್ಳಿ ದಾರಿಯಲ್ಲಿ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರು ಎದುರಾಗುತ್ತದೆ. ಇಲ್ಲಿಂದ ಮುಂದೆ ಸೇತುವೆ ಇಲ್ಲ. ‘ಲಾಂಚ್’ ಮೂಲಕ ಹಿನ್ನೀರು ದಾಟಬೇಕು. ಈ ದಾರಿಯಲ್ಲಿ ಬರುವ ಎಲ್ಲಾ ವಾಹನಗಳಿಗೂ ಲಾಂಚ್ ಬಳಕೆ ಅನಿವಾರ್ಯ. ಹಿನ್ನೀರು ಸುಮಾರು 2 ಕಿ.ಮೀ. ಅಗಲವಿದೆ. ಲಾಂಚ್ ಸೇವೆ ನಿಗದಿತ ಸಮಯಗಳಲ್ಲಿ ಮಾತ್ರ ಲಭ್ಯ.
ಹಿನ್ನೀರು ದಾಟಿದ ನಂತರ ಕಾಡಿನ ರಸ್ತೆಯಲ್ಲಿ 5 ಕಿ.ಮೀ. ಸಾಗಿದರೆ ಚೌಡಮ್ಮ ದೇವಿಯ ದರ್ಶನವಾಗುತ್ತದೆ. ಲಾಂಚ್‌ಗೆ 1ರೂ. ಶುಲ್ಕ, ವಾಹನಗಳಿಗೆ ತಲಾ 5ರೂ. ಹಿನ್ನೀರು ದಾಟಿದ ತಕ್ಷಣ ಸಿಗಂದೂರು ಕ್ಷೇತ್ರಕ್ಕೆ ಹೋಗಲು ಖಾಸಗಿ ವಾಹನಗಳಿವೆ.ಜನರನ್ನು ಸಾಗಿಸಲು ಎರಡು ಲಾಂಚ್‌ಗಳಿವೆ. ಸಾಗರದ ಕಡೆಯಿಂದ ಲಾಂಚ್ ಬಿಡುವ ವೇಳೆ, ಬೆಳಿಗ್ಗೆ 8.15, 9.30, 11.30, ಮಧ್ಯಾಹ್ನ 12, 1.45, 3.15, 5.15 ಹಾಗೂ 5.45ಕ್ಕೆ ಕೊನೆಯ ಸುತ್ತಾಟ. ಸಾಗರದಿಂದ ಬಸ್ ವ್ಯವಸ್ಥೆ ಇದೆ. ಬೆಳಿಗ್ಗೆ 8, 9, 10 ಮಧ್ಯಾಹ್ನ 12, 2, 3.30 ಹಾಗೂ 4.30ರವರೆಗೆ ಬಸ್ ವ್ಯವಸ್ಥೆ ಇದೆ.
ಕೊಲ್ಲೂರು ಕಡೆಯಿಂದ ಬರುವವರು ರಸ್ತೆ ಮಾರ್ಗವಾಗಿ ನಾಗೊಡ್ಡಿ ಘಟ್ಟವನ್ನು ದಾಟಿ ತುಮರಿ ಮಾರ್ಗವಾಗಿ ಸಿಗಂದೂರಿಗೆ ಬರಬಹುದು.ವಾಸ್ತವ್ಯ ಮಾಡುವವರು ಶಿವಮೊಗ್ಗ ಅಥವಾ ಸಾಗರದಲ್ಲಿ ಉಳಿಯಬಹುದು. ಎರಡೂ ಕಡೆ ಸಾಕಷ್ಟು ಉತ್ತಮ ಹೋಟೆಲ್, ಹೋಂ ಸ್ಟೇಗಳಿವೆ. ಸಿಗಂದೂರು ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಉಳಿಯಲು ವ್ಯವಸ್ಥೆ ಇದೆ.ಸಿಗಂದೂರು ಚೌಡಮ್ಮದೇವಿ ದೇವಾಲಯದ ದೂರವಾಣಿ ಸಂಖ್ಯೆ: 08186- 245 088/ 245 114 ಸಂಪರ್ಕಿಸಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.