ನಮಸ್ತೆ ಪ್ರಿಯ ಓದುಗರೇ, ನಮ್ಮ ಕನ್ನಡ ನಾಡು ಹಲವಾರು ಪುರಾಣ ಕಥೆಗಳಿಗೆ ಸಾಕ್ಷಿ ಆಗಿವೆ. ಅದರಲ್ಲೂ ಶ್ರೀ ರಾಮ ಚಂದ್ರನೇ ನಡೆದಾಡಿದ ಈ ಸ್ಥಳವನ್ನು ದಕ್ಷಿಣ ಗಯಾ ಎಂದೇ ಕರೆಯಲಾಗುತ್ತದೆ. ಬನ್ನಿ ಹಾಗಾದರೆ ಅದ ಪುಣ್ಯ ಕ್ಷೇತ್ರ ಯಾವುದು ಅಲ್ಲಿನ ವಿಶೇಷತೆಗಳು ಮಹಿಮೆಗಳನ್ನು ಏನೇನು ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸುಮಾರು ೧೨ ನೇ ಶತಮಾನದಲ್ಲಿ ಗಂಗರು ನಿರ್ಮಿಸಿದರು ಎಂದು ಹೇಳಲಾಗುತ್ತಿರುವ ಕೋಟೆ ಶ್ರೀ ವರದರಾಜ ಸ್ವಾಮಿ ದೇವಾಲಯವು ಭವ್ಯವಾದ ಗೋಪುರ, ಪ್ರದಕ್ಷಿಣಾ ಪಥ, ಗರ್ಭ ಗೃಹ ಹಾಗೂ ಪ್ರಾಂಗಣವನ್ನು ಒಳಗೊಂಡಿದೆ. ಪುರಾಣ ಪ್ರಸಿದ್ಧವಾದ ಈ ಸ್ಥಳಕ್ಕೆ ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ನು ಸೀತನ್ವೇಷಣೆ ಮಾಡುತ್ತಾ ಈ ಸ್ಥಳಕ್ಕೆ ಭೇಟಿ ನೀಡಿದ್ದನಂತೆ. ನಂತರ ಇಲ್ಲಿನ ಕಾವೇರಿ ನದಿ ತೀರದಲ್ಲಿ ತನ್ನ ತಂದೆಯಾದ ದಶರಥನಿಗೆ ಪಿಂಡ ಪ್ರದಾನ ಮಾಡಿದನು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ರಾಮನು ತನ್ನ ತಂದೆಗೆ ಪಿಂಡ ಪ್ರಧಾನ ಮಾಡಿದ್ದರಿಂದ ಈ ಕ್ಷೇತ್ರಕ್ಕೆ ದಕ್ಷಿಣ ಗಯಾ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ವರದರಾಜ ಸ್ವಾಮಿಯನ್ನು ಪೂಜಿಸುವ ಈ ದೇಗುಲಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಸ್ವಾಮಿಯು ಇಷ್ಟಾರ್ಥಗಳನ್ನು ಸಿದ್ಧಿ ಮಾಡ್ತಾನೆ ಎಂದು ಹೇಳಲಾಗುತ್ತದೆ.
ವರದರಾಜ ಸ್ವಾಮಿಯ ಜೊತೆ ಅಮ್ಮನವರು, ಲಕ್ಷ್ಮೀ ನರಸಿಂಹ ಸ್ವಾಮಿ, ರಾಮಾನುಜಾಚಾರ್ಯರು ವೇದಾಂತಿಕರ, ದರ್ಷಿಕರ ವಿಗ್ರಹವನ್ನು ಕೂಡ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ರಾಮಾನುಜಾಚಾರ್ಯರು ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಯ ದರ್ಶನ ಮಾಡಲು ಹೋಗುವುದಕ್ಕೆ ಮುನ್ನ ಈ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಮೇಲುಕೋಟೆಯ ತಲುಪಿದರು ಎಂದು ಈ ಕ್ಷೇತ್ರದ ಮಹಿಮೆಗೆ ಹಿಡಿದ ಕೈಗನ್ನಡಿ ಆಗಿದೆ. ಇನ್ನೂ ೧೩ ನೇ ಶತಮಾನದಲ್ಲಿ ವೇದಾಂತ ದೇಶಿಕ ಎಂಬ ಸಾಧಕರು ಈ ಸ್ಥಳಕ್ಕೆ ಬಂದು ಕೂರ್ಮಾಸನದಲ್ಲಿ ಕುಳಿತು ಸುಮಾರು ೧೩ ವರ್ಷಗಳ ಕಾಲ ತಪಸ್ಸನ್ನು ಮಾಡಿ ಇಲ್ಲಿ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ ತಮ್ಮ ತಪೋ ಶಕ್ತಿಯನ್ನು ವಿಗ್ರಹಕ್ಕೆ ಧಾರೆ ಎರೆದರು ಎಂಬ ಮಾಹಿತಿಗಳನ್ನು ದೇಗುಲದ ಸ್ಥಳ ಐತಿಹ್ಯದಲ್ಲಿ ತಿಳಿಸಲಾಗಿದೆ. ಸತ್ಯ ಕ್ಷೇತ್ರವೆಂದು ಪ್ರಸಿದ್ಧವಾದ ಈ ಆಲಯದಲ್ಲಿ ಅಮಾವಾಸ್ಯೆ, ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ವರದರಾಜ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
ನವರಾತ್ರಿಯಲ್ಲಿ ಉತ್ಸವಗಳನ್ನು ನಡೆಸಲಾಗುತ್ತಿದ್ದು ಈ ಸಮಯದಲ್ಲಿ ಸರ್ವಾಲಂಕೃತ ಭೂಶಿತನಾದ ಸ್ವಾಮಿಯನ್ನು ನೋಡೋದೇ ಬದುಕಿನ ಸೌಭಾಗ್ಯ ಆಗಿದೆ. ಪ್ರತಿ ವರ್ಷವೂ ದೇವರ ಬ್ರಹ್ಮ ರಥೋತ್ಸವ ವನ್ನಾ ಕೂಡ ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಿತ್ಯ ಪೂಜೆಗೊಳ್ಳುತ್ತಿರುವ ಇಲ್ಲಿನ ವರದರಾಜ ಸ್ವಾಮಿಯನ್ನು ಬೆಳಿಗ್ಗೆ ೬ ಗಂಟೆ ಇಂದ ಮಧ್ಯಾನ ೧೨ ಗಂಟೆವರೆಗೂ ಸಂಜೆ ೫ ಗಂಟೆಯಿಂದ ರಾತ್ರಿ ೮ ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅರ್ಚನೆ, ಅಭಿಷೇಕ, ಅಲಂಕಾರ ಸೇವೆ, ಹಣ್ಣು ಕಾಯಿ ಸೇವೆ ಮಾಡಿಸಬಹುದು. ತನ್ನ ಬಳಿ ಬರುವ ಭಕ್ತರ ಅಭೀಷ್ಟೆಗಳನ್ನ ಪೂರ್ಣ ಮಾಡುವ ವರದರಾಜ ಸ್ವಾಮಿಯ ಈ ಪುಣ್ಯ ಕ್ಷೇತ್ರವೂ ಕೊಳ್ಳೇಗಾಲ ಸಮೀಪ ಇರುವ ಸತ್ಯಗಾಲ ಎಂಬ ಊರಿನಲ್ಲಿ ದೆ. ಈ ದೇಗುಲವು ರಾಜಧಾನಿ ಬೆಂಗಳೂರಿನಿಂದ ೧೨೯ ಕಿಮೀ, ಮೈಸೂರಿನಿಂದ ೭೪ ಕಿಮೀ, ಕೊಳ್ಳೇಗಾಲ ದಿಂದ ಕೇವಲ ೧೩ ಕಿಮೀ ದೂರದಲ್ಲಿದೆ. ಕೊಳ್ಳೇಗಾಲ ದಿಂದ ಸರ್ಕಾರಿ ಬಸ್ ಮೂಲಕ ಸುಲಭವಾಗಿ ಈ ದೇಗುಲಕ್ಕೆ ತಲುಪಬಹುದಾಗಿದೆ. ಸಾಧ್ಯವಾದರೆ ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ನಿರ್ಮಿಸಿರುವ ಈ ದೇಗುಲಕ್ಕೆ ಭೇಟಿ ನೀಡಿ. ಶುಭದಿನ.