ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಂದು ಊರಿಗೂ ಒಂದೊಂದು ಐತಿಹಾಸಿಕ ಹಿನ್ನೆಲೆ ಇರುತ್ತೆ, ಅದರಲ್ಲೂ ನಮ್ಮ ನಾಡಿನಲ್ಲಿ ಋಷಿ ಮುನಿಗಳಿಂದ ಪಾವನವಾದ ಪುಣ್ಯ ಕ್ಷೇತ್ರಗಳಿಗೆ ಲೆಕ್ಕವೇ ಇಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಪುರಾತನವಾದ ಲಕ್ಷ್ಮಿ ನರಸಿಂಹ ಸ್ವಾಮಿಯ ಪುಣ್ಯ ಕ್ಷೇತ್ರದ ಬಗ್ಗೆ ಮಾಹಿತಿ ತಿಳಿದುಕೊಂಡು ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಸ್ವಚ್ಛ ಸುಂದರವಾದ ಪರಿಸರದಲ್ಲಿ ಭವ್ಯವಾದ ಲಕ್ಷ್ಮೀ ನರಸಿಂಹ ಸ್ವಾಮಿಯ ದೇಗುಲವಿದ್ದು, ಸುಮಾರು 800 ವರ್ಷಗಳ ಹಿಂದೆ ಈ ದೇಗುಲವನ್ನು ಚೋಳರು ನಿರ್ಮಿಸಿದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಹೇಮಾವತಿ ನದಿಯ ಸಮೀಪದಲ್ಲಿ ಇರುವ ಈ ದೇಗುಲವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಲಾಗಿದೆ. ದೇಗುಲವು ಬೃಂದಾವನ, ಗೋಪುರ, ಪ್ರದಕ್ಷಿಣಾ ಪಥ, ಅಂತರಾಳ, ಮಹಾ ಮಂಟಪ, ಮುಖ ಮಂಟಪ ಹಾಗೂ ಗರ್ಭ ಗೃಹವನ್ನು ಒಳಗೊಂಡಿದೆ. ದೇಗುಲದ ಮುಂದಿರುವ ಬೃಂದಾವನವನ್ನು ಭಕ್ತಿಯಿಂದ 256 ಬಾರಿ ಪ್ರದಕ್ಷಿಣೆ ಮಾಡಿದರೆ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೇ ಲಕ್ಷ್ಮೀ ನರಸಿಂಹ ಸ್ವಾಮಿಯು ಪಶ್ಚಿಮಾಭಮುಖವಾಗಿ ನೆಲೆಸಿರುವ ಈ ಕ್ಷೇತ್ರಕ್ಕೆ ಬಂದು ಲಕ್ಷ್ಮೀ ನರಸಿಂಹ ಸ್ವಾಮಿಯ ಬಳಿ ಭಕ್ತಿಯಿಂದ ಬೇಡಿಕೊಂದರೆ ಸಕಲ ಸಂಕಷ್ಟಗಳು ದೂರ ಆಗುತ್ತೆ ಎನ್ನುವುದು ಇಲ್ಲಿಗೆ ಬಂದು ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ.
ದೇಗುಲದ ಗರ್ಭಗುಡಿ ಒಳಗಡೆ ಶಿಲಾ ರೂಪಿಯಾದ ನರಸಿಂಹ ಸ್ವಾಮಿಯು ತೊಡೆಯ ಮೇಲೆ ಲಕ್ಷ್ಮೀ ದೇವಿಯನ್ನು ಕುಳ್ಳಿರಿಸಿಕೊಂಡು ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿರೂವಾ ಈ ಸ್ವಾಮಿಯನ್ನು ನೋಡೋದೇ ಬದುಕಿನ ಸೌಭ್ಯಾಗ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಗೌತಮ ಮುನಿಗಳು ಈ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ತಪಸ್ಸನ್ನು ಮಾಡುವಾಗ ಅವರ ತಪೋ ನಿಷ್ಠೆಗೆ ಮೆಚ್ಚಿ ಸ್ವಾಮಿಯು ಪ್ರತ್ಯಕ್ಷನಾಗಿ ಇಲ್ಲಿ ಶಿಲಾ ರೂಪದಲ್ಲಿ ನೆಲೆಸಿದರು ಎಂದು ಹೇಳಲಾಗುತ್ತದೆ. ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಮಾಘ ಮಾಸದಲ್ಲಿ ರಥೋತ್ಸವವನ್ನಾ ವಿಜೃಂಭಣೆ ಇಂದ ಆಚರಿಸಲಾಗುತ್ತದೆ. ಗರುಡ ದರ್ಶನದ ನಂತರ ಸ್ವಾಮಿಯ ರಥೋತ್ಸವವನ್ನು ನಡೆಸೋದು ಈ ಕ್ಷೇತ್ರದಲ್ಲಿ ನಡೆಯುವ ವಿಶೇಷವಾದ ಸಂಪ್ರದಾಯವಾಗಿದ್ದು, ಜಾತ್ರೆಯ ದಿನ ಇಲ್ಲಿಗೆ ಆಗಮಿಸುವ ಭಕ್ತರು ದೇವರ ತೇರಿಗೆ ದವಸ ಧಾನ್ಯ ಹಣ್ಣುಗಳನ್ನು ಎಸೆದು ದೇವರಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಶ್ರಾವಣ ಮಾಸ, ನರಸಿಂಹ ಜಯಂತಿ, ಕಾರ್ತಿಕಾ ಮಾಸದ ದೀಪೋತ್ಸವ ದಿನದಂದು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯ ವೈಕಾನಸ ಆಗಮನ ರೀತಿಯಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಪ್ರತಿ ಶನಿವಾರವೂ ಸ್ವಾಮಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.
ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಬೆಣ್ಣೆ ಅಲಂಕಾರ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಇಲ್ಲಿ ನೆಲೆಸಿರುವ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಸೋಮವಾರ, ಮಂಗಳವಾರ, ಭುಧವಾರ, ಹಾಗೂ ಗುರುವಾರ ದಿನಗಳಂದು ಬೆಳಿಗ್ಗೆ ಹತ್ತು ಗಂಟೆ ಇಂದ ಮಧ್ಯಾನ 12 ಗಂಟೆ ವರೆಗೆ, ಶನಿವಾರ ಹಾಗೂ ಭಾನುವಾರ ದಿನದಂದು ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಗೌತಮ ಕ್ಷೇತ್ರ ಎಂದೇ ಖ್ಯಾತವಾಗಿರುವ ಈ ಪುಣ್ಯ ಕ್ಷೇತ್ರವೂ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಎಂಬ ಊರಿನಲ್ಲಿ ಇದೆ. ಈ ದೇಗುಲವು ಮೈಸೂರಿನಿಂದ 60ಕಿಮೀ, ಮಂಡ್ಯ ದಿಂದ 77 ಕಿಮೀ, ಹಾಸನದಿಂದ 62 ಕಿಮೀ, ಅಕ್ಕಿಹೆಬ್ಬಾಳು ಕ್ಷೇತ್ರದಿಂದ 2 ಕಿಮೀ ದೂರದಲ್ಲಿದೆ. ಅಕ್ಕಿಹೆಬ್ಬಾಳು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪಾವನರಾಗೀ ಎಂದು ಹೇಳ್ತಾ ನರಸಿಂಹ ಸ್ವಾಮಿಗೆ ಅರ್ಪಿತವಾದ ದೇವತಾಕಾರ್ಯ ಸಿದ್ಯರ್ಥಮ್ ಸಭಾ ಸ್ಥಂಭ ಸಮುದ್ಭವಾಂ ಶ್ರೀ ನರಸಿಂಹ ಮಹಾ ವೀರಂ ನಮಾಮಿ ಋಣ ಮುಕ್ತಾಯೇ ಎನ್ನುವ ಶ್ಲೋಕವನ್ನು ಪಠಿಸುತ್ತಾ ಇವತ್ತಿನ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ. ಶುಭದಿನ.