ಅತಿಯಾದ ಬಿಸಿಯಾಗಿರುವ ಯಾವುದೇ ಆಹಾರ ಸೇವನೆ ಮಾಡಿದರೂ ನಾಲಗೆ ಸುಟ್ಟು ಬೊಕ್ಕೆಗಳು ಮೂಡುವುದು. ಇದು ಗುಣವಾಗಲು ಕೆಲವು ದಿನಗಳೇ ಬೇಕಾಗುವುದು. ಕೆಲವೊಮ್ಮೆ ಆಹಾರ ಜಗಿಯುವಾಗ ಅಥವಾ ಮಾತನಾಡುವಾಗ ಕೂಡ ನಾಲಗೆ ಕಚ್ಚಿ ಹೋಗುವುದು ಇದೆ.
ಇದು ಪ್ರತಿಯೊಬ್ಬರಿಗೂ ಆಗುವಂತಹ ಅನುಭವ. ಆದರೆ ನಾಲಗೆ ಮೇಲೆ ಬೊಕ್ಕೆ ಮೂಡಲು ಇತರ ಕೆಲವೊಂದು ಕಾರಣಗಳು ಇವೆ. ಆಹಾರದ ಅಲರ್ಜಿ, ವೈರಲ್ ಸೋಂಕು, ಬಾಯಿಯ ಅಲ್ಸರ್, ನಾಲಗೆ ಸುಡುವ ರೋಗ, ಮಧುಮೇಹ, ರಕ್ತಹೀನತೆ ಮತ್ತು ಬಾಯಿಯ ಕ್ಯಾನ್ಸರ್ ನಿಂದಲೂ ಬೊಕ್ಕೆಗಳು ಮೂಡಬಹುದು. ನಾಲಗೆಯ ನೋವು ಮತ್ತು ಉರಿಯೂತವು ತೀರ ಕಿರಿಕಿರಿಯುಂಟು ಮಾಡುವುದು. ನಾಲಗೆಯಲ್ಲಿ ಬೊಕ್ಕೆಗಳು ಮೂಡಿದರೆ ಅದರಿಂದ ಏನೇ ತಿಂದರೂ ರುಚಿ ಸಿಗದು. ಈ ಸಮಸ್ಯೆ ಒಂದು ವಾರ ಕಾಲ ಇರುವುದು. ಆದರೆ ಕೆಲವೊಂದು ಮನೆಮದ್ದು ಬಳಸಿಕೊಂಡು ಇದನ್ನು ಬೇಗನೆ ನಿವಾರಿಸಬಹುದು. ಇಂತಹ ಮನೆಮದ್ದುಗಳ ಬಗ್ಗೆ ನೀವು ತಿಳಿದುಕೊಳ್ಳಿ.
ಉಪ್ಪು: ನಾಲಗೆಯಲ್ಲಿ ಮೂಡಿರುವ ಬೊಕ್ಕೆಗಳಿಗೆ ಉಪ್ಪು ತುಂಬಾ ಪರಿಣಾಮಕಾರಿ ಮನೆ ಔಷಧಿ. ಇದು ಉರಿಯೂತ ಮತ್ತು ನೋವು ನಿವಾರಣೆ ಮಾಡುವುದು. ಇದು ಬ್ಯಾಕ್ಟೀರಿಯಾ ಕೊಲ್ಲುವುದು ಮತ್ತು ಸೋಂಕು ತಡೆಯುವುದು. ಒಂದು ಚಮಚ ಉಪ್ಪನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿ ಕಲಸಿ. ಇದನ್ನು ಬಾಯಿಗೆ ಹಾಕಿಕೊಂಡು ಸುಮಾರು 30 ಸೆಕೆಂಡು ಕಾಲ ಹಾಗೆ ಬಿಡಿ. ಬಳಿಕ ಉಗುಳಿ. ದಿನದಲ್ಲಿ ಐದು ಸಲ ಹೀಗೆ ಮಾಡಿದರೆ ಫಲಿತಾಂಶ ಸಿಗುವುದು.
ಅಡುಗೆ ಸೋಡಾ: ಅಡುಗೆ ಸೋಡಾದಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣದಿಂದಾಗಿದ ಇದು ನೋವು ಮತ್ತು ಉರಿಯೂತ ನಿವಾರಣೆ ಮಾಡುವ ಮೂಲಕ ನಾಲಗೆ ಬೊಕ್ಕೆಯನ್ನು ಪರಿಣಾಮಕಾರಿಯಾಗಿ ನಿವಾರಿಸುವುದು. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಕಪ್ ಉಗುರುಬೆಚ್ಚಗಿನ ನೀರಿಗೆ ಹಾಕಿ. ಈ ಮಿಶ್ರಣವನ್ನು ಕೆಲವು ನಿಮಿಷ ಕಾಲ ಬಾಯಿಯಲ್ಲಿಡಿ ಮತ್ತು ಬಳಿಕ ಉಗುಳಿ.
ಅರಶಿನ: ನಾಲಗೆಯ ಬೊಕ್ಕೆಯಿಂದ ಉಂಟಾಗಿರುವಂತಹ ನೋವು ಹಾಗೂ ಉರಿಯೂತವನ್ನು ಅರಶಿನದಲ್ಲಿ ಇರುವಂತಹ ನಂಜುನಿರೋಧಕ ಗುಣವು ನಿವಾರಣೆ ಮಾಡುವುದು. ಅರ್ಧ ಚಮಚ ಅರಶಿನ ಹುಡಿಗೆ ಒಂದು ಚಮಚ ಜೇನುತುಪ್ಪ ಹಾಕಿ ಕಲಸಿಕೊಂಡು ಅದನ್ನು ಬೊಕ್ಕೆಗಳಿಗೆ ಹಚ್ಚಿಕೊಳ್ಳಿ. ಮೂರು ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮಂಜುಗಡ್ಡೆ: ಮಂಜುಗಡ್ಡೆಯು ತಕ್ಷಣ ನಾಲಗೆಗೆ ಶಮನ ನೀಡಿ ಪರಿಹಾರ ಒದಗಿಸುವುದು. ಇದು ನಾಲಗೆಯ ಊತ ಮತ್ತು ಉರಿಯೂತ ಕಡಿಮೆ ಮಾಡುವುದು. ಮಂಜುಗಡ್ಡೆ ತುಂಡುಗಳನ್ನು ನೇರವಾಗಿ ಬೊಕ್ಕೆ ಮೇಲಿಡಿ ಅಥವಾ ಇದನ್ನು ನಯವಾಗಿ ನಾಲಗೆಗೆ ಉಜ್ಜಿಕೊಂಡರೆ ಬೊಕ್ಕೆಗಳು ಮಾಯವಾಗುವುದು.
ಅಲೋವೆರಾ: ಅಲೋವೆರಾದಲ್ಲಿ ಇರುವಂತಹ ನೈಸರ್ಗಿಕ ಶಮನಕಾರಿ ಗುಣ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಇದು ನಾಲಗೆ ಬೊಕ್ಕೆಗಳ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಅಲೋವೆರಾ ಎಲೆಯನ್ನು ತುಂಡು ಮಾಡಿಕೊಂಡು ಅದರ ಲೋಳೆ ತೆಗೆಯಿರಿ. ಇದನ್ನು ನಾಲಗೆಗೆ ಹಚ್ಚಿಕೊಳ್ಳಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನದಲ್ಲಿ ನಾಲ್ಕು ಸಲ ಹೀಗೆ ಮಾಡಿ.
ತುಳಸಿ: ತುಳಸಿ ತುಂಬಾ ಪರಿಣಾಮಕಾರಿ ಗಿಡಮೂಲಿಕೆ. ಇದನ್ನು ನಾಲಗೆಯ ಬೊಕ್ಕೆಗಳ ಚಿಕಿತ್ಸೆಗೆ ಬಳಸಲಾಗುವುದು. ಇದು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಇದು ಉರಿಯೂತ ಹಾಗೂ ನೋವು ನಿವಾರಣೆ ಮಾಡುವುದು. ತುಳಸಿ ಎಲೆಗಳನ್ನು ತೊಳೆದು ಜಗಿಯಿರಿ. ಇದರ ಬಳಿಕ ಸ್ವಲ್ಪ ನೀರು ಕುಡಿಯಿರಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ.
ಕೊತ್ತಂಬರಿ ಕಾಳುಗಳು: ಕೊತ್ತಂಬರಿ ಕಾಳುಗಳಲ್ಲಿ ಉರಿಯೂತ ಶಮನಕಾರಿ ಮತ್ತು ನಂಜು ನಿರೋಧಕ ಗುಣಗಳು ಇವೆ. ಇದು ನಾಲಗೆಯ ಬೊಕ್ಕೆಗಳನ್ನು ನಿವಾರಣೆ ಮಾಡುವುದು. ಒಂದು ಕಪ್ ನೀರಿನಲ್ಲಿ ಕೊತ್ತಂಬರಿ ಕಾಳುಗಳನ್ನು ಕುದಿಸಿ. ನೀರನ್ನು ಸೋಸಿಕೊಳ್ಳಿ ಮತ್ತು ಇದರಿಂದ ಬಾಯಿ ಮುಕ್ಕಳಿಸಿ. ಪ್ರತಿನಿತ್ಯ ನಾಲ್ಕು ಸಲ ಹೀಗೆ ಮಾಡಿ.
ಜೇನುತುಪ್ಪ: ಜೇನುತುಪ್ಪದಲ್ಲಿ ಉರಿಯೂತ ಶಮನಕಾರಿ, ನೋವು ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ನಾಲಗೆಯ ಬೊಕ್ಕೆ ನಿವಾರಣೆಗೆ ತುಂಬಾ ಪರಿಣಾಮಕಾರಿ. ಜೇನುತುಪ್ಪದಲ್ಲಿ ಒಂದು ಹತ್ತಿ ಉಂಡೆ ಮುಳುಗಿಸಿ ಮತ್ತು ಇದನ್ನು ಬೊಕ್ಕೆಗಳಿಗೆ ಹಚ್ಚಿ. ಐದು ನಿಮಿಷ ಹಾಗೆ ಬಿಟ್ಟು ಬಳಿಕ ಬಾಯಿ ತೊಳೆಯಿರಿ.
ಬೆಳ್ಳುಳ್ಳಿ ಮತ್ತು ಶುಂಠಿ: ಶುಂಠಿ ಮತ್ತು ಬೆಳ್ಳುಳ್ಳಿಯಲ್ಲಿ ತುಂಬಾ ಪ್ರಬಲ ಉರಿಯೂತ ಶಮನಕಾರಿ ಮತ್ತು ನೋವು ನಿವಾರಕ ಗುಣಗಳು ಇವೆ. ನಾಲಗೆಯಲ್ಲಿರುವ ನೋವುಕಾರಕ ಬೊಕ್ಕೆಗಳನ್ನು ಇದು ನಿವಾರಿಸುವುದು. ಬೆಳ್ಳುಳ್ಳಿ ಎಸಲುಗಳು ಮತ್ತು ಶುಂಠಿಯನ್ನು ದಿನದಲ್ಲಿ ಹಲವಾರು ಸಲ ಜಗಿಯಿರಿ.
ಹಾಲು: ಹಾಲಿನಲ್ಲಿ ಇರುವಂತಹ ಜೈವಿಕ ಕ್ರಿಯಾಶೀಲ ಗುಣವು ಬಾಯಿಯ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ಹಾಲಿನಲ್ಲಿ ಉರಿಯೂತ ಶಮನಕಾರಿ ಗುಣವಿದೆ. ಇದು ನಾಲಗೆ ಬೊಕ್ಕೆಯನ್ನು ವೇಗವಾಗಿ ನಿವಾರಣೆ ಮಾಡುವುದು. ದಿನದಲ್ಲಿ ಎರಡು ಲೋಟ ಹಾಲು ಕುಡಿಯಿರಿ.
ವಿಟಮಿನ್ ಬಿ: ವಿಟಮಿನ್ ಬಿ ಕೊರತೆಯಿಂದಾಗಿ ಕೆಲವು ಸಲ ನಾಲಗೆಯಲ್ಲಿ ಬೊಕ್ಕೆಗಳು ಕಾಣಿಸಿಕೊಳ್ಳುವುದು. ಇದರಿಂದಾಗಿ ವಿಟಮಿನ್ ಬಿ ಇರುವಂತಹ ಆಹಾರ ಹೆಚ್ಚು ಸೇವಿಸಿ. ಧಾನ್ಯಗಳು, ಮೊಟ್ಟೆ, ಸಾಲ್ಮನ್, ಓಟ್ಸ್, ಅವಕಾಡೋ, ಬಾಳೆಹಣ್ಣು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಸೇವಿಸಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.