ಒಮ್ಮೆ ನಮ್ಮ ಇಡೀ ದಿನವನ್ನು ಕಣ್ಮುಂದೆ ತಂದುಕೊಳ್ಳಿ ಮತ್ತು ಯೋಚಿಸಿ ಹೇಳಿ. ನಾವು ಒಂದು ದಿನದಲ್ಲಿ ಹೆಚ್ಚು ತಿನ್ನುತ್ತೇವಾ? ಹೆಚ್ಚು ನೀರನ್ನು ಕುಡಿಯುತ್ತೇವಾ?ತಿನ್ನುತ್ತೇವೆ ಎಂದಾದಲ್ಲಿ.. ಎಷ್ಟು ತಿನ್ನುತ್ತೇವೆ? ಹಸಿವು ನೀಗಿಸಿಕೊಳ್ಳಲು ತಿನ್ನುತ್ತೇವಾ? ಬಾಯಿ ಚಪಲಕ್ಕಾಗಿ ತಿನ್ನುತ್ತೇವಾ? ಎಂಬ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮಕ್ಕಳಾದಿಯಾಗಿ ಬಹುಪಾಲು ಜನರು ಹೆಚ್ಚೆಚ್ಚು ತಿನ್ನುವ ಅಭ್ಯಾಸದಿಂದಾಗಿ ಅನಾರೋಗ್ಯಕ್ಕೆ ಈಡಾಗುತಿದ್ದೇವೆ ಎಂಬುದನ್ನು ತಿಳಿದೋ-ತಿಳಿಯದೋ ತಿನ್ನುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ವಿಚಾರದಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಲೇಬೇಕು. ಕೆಲಸದ ಒತ್ತಡ, ಬಿಡುವಿನ ಕೊರತೆ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ಆರೋಗ್ಯ ಕೆಡಲು ಅವಕಾಶ ನೀಡಬಾರದು. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ಮಹತ್ವ ಅರಿತು ಬಾಳ್ವೆ ನಡೆಸುವುದು ಒಳ್ಳೆಯದಲ್ಲವೆ??
ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವು ಕುಡಿಯುವ ನೀರೂ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗೆಂದು ನಮ್ಮ ಹಿಂದಿನ ತಲೆಮಾರಿನವರು ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ ಎಂದು ಅರ್ಥೈಸಿಕೊಳ್ಳುವ ಅಗತ್ಯವಿಲ್ಲ.
ಆದರೆ ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ, ಸಾಮಥ್ರ್ಯಗಳು ಹೆಚ್ಚಾಗಿದ್ದ ಕಾರಣ ಸ್ವಲ್ಪ ಏರುಪೇರಾದರೂ ತಡೆದುಕೊಳ್ಳುವ ಶಕ್ತಿ ಅಗಾಧವಾಗಿತ್ತು. ಈಗಿನ ಪೀಳಿಗೆಯವರಿಗೆ ಅಂತಹ ಶಕ್ತಿ ಸಾಮಥ್ರ್ಯಗಳ ಪ್ರಮಾಣ ಕಡಿಮೆ ಇರುತ್ತದೆ ಎಂದರೂ ತಪ್ಪಾಗಲಾರದು, ಕಾರಣ ನಮ್ಮ ಜೀವನ ಶೈಲಿ. ಉದಾಹರಣೆಗೆ ನಮ್ಮ ಪೂರ್ವಜರು, ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿಡುತ್ತಿದ್ದ ನೀರನ್ನು ಕುಡಿಯುತ್ತಿದ್ದರು. ಮಣ್ಣಿನ ಮಡಿಕೆಯಲ್ಲಿನ ನೀರು ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಹಾನಿ ಮಾಡುತ್ತಿರಲಿಲ್ಲ. ಈಗಲೂ ಕೆಲವರು ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿಸಿಟ್ಟುಕೊಂಡು ಕುಡಿಯುತ್ತಿದ್ದಾರೆ.
ಹೆಲ್ತ್ ಕಾನ್ಷಿಯಸ್ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಪರಸ್ಥಳಗಳಿಗೆ ಹೋಗುವ ಜನ, ಕುಡಿಯುವ ನೀರಿನ ವಿಚಾರದಲ್ಲಿ ಕಾಳಜಿ ವಹಿಸುತ್ತಿರುವುದನ್ನು ನಾವು ಕಾಣುತ್ತೇವೆ. ಖನಿಜಯುಕ್ತ ನೀರನ್ನು (ಮಿನರಲ್ ವಾಟರ್) ಖರೀದಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ನೀರು ಶುದ್ಧವಾಗಿದ್ದರೆ ಮಾತ್ರ ಸಾಲದು ಸರಿಯಾದ ತಾಪಮಾನದಲ್ಲಿದ್ದರೆ, ಆರೋಗ್ಯಕ್ಕೆ ಪೂರಕವಾಗಿರಬೇಕು. ಏಕೆಂದರೆ, ನೀರಿನಲ್ಲಿ ಕರಗಿರುವ ಲವಣಗಳು ಪ್ರತಿಯೊಂದು ಪ್ರದೇಶಗಳಲ್ಲಿಯೂ ಬೇರೆ ಬೇರೆಯಾಗಿರುತ್ತದೆ. ಇಂತಹ ನೀರನ್ನು ಕುಡಿದರೆ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಶುದ್ಧ ನೀರಿನ ಅಗತ್ಯ ಮನೆಮನೆಗಳಿಗೂ ಬಂದೊದಗಿದೆ. ಅದಕ್ಕಾಗಿ ಆರ್.ಓ. ಫಿಲ್ಟರ್ ಅಕ್ವಾಗಾರ್ಡ್ ಮುಂತಾದವು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಆದರೆ ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸಿಡುವ ನೀರು, ಸ್ಟೀಲ್, ಪ್ಲಾಸ್ಟಿಕ್ ಅಥವಾ ಗಾಜಿನ ಜಾಡಿಗಳಲ್ಲಿ ಸಂಗ್ರಹಿಸಿಡುವ ನೀರಿಗಿಂತ ಆರೋಗ್ಯಕರ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.
ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ನೀರಿನಲ್ಲಿ ಬಿಸಿಲಿನ ಮೂಲಕ ಪ್ಲಾಸ್ಟಿಕ್‍ನಲ್ಲಿರುವ ಬಿಪಿಎ ಎಂಬ ಹಾನಿಕಾರಕ ಕಣ ಕರಗಿರುತ್ತದಂತೆ. ಇಂತಹ ನೀರನ್ನು ಕುಡಿದರೆ, ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ಮಡಿಕೆಯಲ್ಲಿಡುವ ನೀರಿನಲ್ಲಿ ಯಾವುದೇ ಅಂಶಗಳು ಕರಗುವುದಿಲ್ಲ.
ಮಡಿಕೆಯಲ್ಲಿನ ನೀರು ಅಪ್ಪಟವಾಗಿದ್ದು, ಜೀವ ರಾಸಾಯನಿಕ ಕ್ರಿಯೆಗಳನ್ನು ಉತ್ತಮಗೊಳಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ, ಮಡಿಕೆಯಲ್ಲಿ ಸಂಗ್ರಹಿಸಿದ ನೀರು ಥಟ್ಟನೆ ಅಪ್ಪಟವಾಗುವುದಿಲ್ಲ. ಒಂದು ರಾತ್ರಿಯಾದರೂ ಇಡಬೇಕು. ಬಳಿಕ ನೀರನ್ನು ಕುಡಿದರೆ ಪ್ರಯೋಜನವಾಗುತ್ತದೆ.
ವಾಸ್ತವವಾಗಿ ಮಣ್ಣಿನಲ್ಲಿರುವ ಲವಣಗಳು ಕ್ಷಾರೀಯವಾಗಿವೆ. ಯಾವುದೇ ಸೆಲೆಯಿಂದ ಬಂದ ನೀರು ಕೊಂಚವಾದರೂ ಆಮ್ಲೀಯತೆ ಹೊಂದಿರುತ್ತದೆ. ಮಣ್ಣಿನಲ್ಲಿರುವ ಲವಣಗಳು ಈ ಆಮ್ಲಗಳನ್ನು ತಟಸ್ಥಗೊಳಿಸಿ ನೀರನ್ನು ಶುದ್ಧೀಕರಿಸುತ್ತವೆ. ಇದೇ ಕಾರಣಕ್ಕೆ ನೆಲದಿಂದ ಉಕ್ಕಿದ ಅಥವಾ ಬಂಡೆಗಳ ನಡುವೆ ಜಿನುಗುವ ನೀರು ಅಪ್ಪಟವಾಗಿರುತ್ತದೆ.
ಯಾವುದೇ ಪರಸ್ಥಳಕ್ಕೆ ಹೋದಾಗ ಆ ಊರಿನ ನೀರನ್ನು ಕುಡಿದರೆ, ಸಾಮಾನ್ಯವಾಗಿ ಗಂಟಲ ತುರಿಕೆ ಶುರುವಾಗುತ್ತದೆ. ಆದರೆ ಮಡಿಕೆಯಲ್ಲಿ ಸಂಗ್ರಹಿಸಿಟ್ಟ ನೀರು ಕುಡಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ.
ದಣಿದು ಬರುವವರಿಗೆ ಫ್ರಿಡ್ಜ್‍ನ ನೀರನ್ನು ಕೊಡುವುದು ಸಾಮಾನ್ಯ. ಆದರೆ ಇಂತಹ ನೀರನ್ನು ಕುಡಿದರೆ, ದೇಹದ ತಾಪಮಾನ ತಕ್ಷಣ ಇಳಿದುಬಿಡುವ ಸಾಧ್ಯತೆಗಳಿರುತ್ತವೆ. ಅದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಈ ಎಲ್ಲಾ ಕಾರಣಗಳಿಂದಾಗಿ ಕುಡಿಯುವ ನೀರಿನ ವಿಚಾರದಲ್ಲಿ ಎಚ್ಚರ ಅಗತ್ಯ. ಶುದ್ಧ ನೀರನ್ನು ಕುಡಿಯುವತ್ತ ಗಮನ ಹರಿಸುವುದರ ಜತೆಗೆ ಆರೋಗ್ಯ ಸುಧಾರಣೆಗೆ ಮಹತ್ವ ನೀಡಬೇಕು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.