ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ ಈ ವೈದ್ಯನಾಥೇಶ್ವರ ಸ್ವಾಮಿ, ಇದರ ಬಗ್ಗೆ ಒಂದಿಷ್ಟು ಮಾಹಿತಿ..!

Hit

ಮದ್ದೂರಿನ ತಾಲ್ಲೂಕಿನ ಶಿಂಷಾ ನದಿ ದಂಡೆಯ ಮೇಲಿರುವ ವೈದ್ಯನಾಥಪುರದ ವೈದ್ಯನಾಥೇಶ್ವರ ಕ್ಷೇತ್ರ ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ. ಈ ದೇವಸ್ಥಾನಕ್ಕೆ ಬರುವವರಲ್ಲಿ ಬಹುತೇಕ ಜನರು ಚರ್ಮದ ರೋಗಗಳಿಗೆ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗದೆ ಕೊನೆಯ ಪ್ರಯತ್ನವಾಗಿ ವೈದ್ಯನಾಥೇಶ್ವರನಿಗೆ ಹರಕೆ ಕಟ್ಟಿಕೊಂಡು ಪೂಜೆ ಸಲ್ಲಿಸಲು ಬರುತ್ತಾರೆ.

ಶಿಂಷಾ ನದಿಯಲ್ಲಿ ಮಿಂದು ಬೆಲ್ಲ ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ನದಿ ಸಮರ್ಪಿಸುತ್ತಾರೆ. ಬಳಿಕ ದೇವರ ದರ್ಶನ ಪಡೆದು ಗರ್ಭ ಗುಡಿಯಲ್ಲಿರುವ ಹುತ್ತದ ಮಣ್ಣನ್ನು ಪಡೆದು ಹಿಂದಿರುಗುತ್ತಾರೆ. ಈ ಹುತ್ತದ ಮಣ್ಣನ್ನು ರೋಗದ ಭಾಗಕ್ಕೆ ಲೇಪಿಸಿಕೊಂಡರೆ ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

ವೈದ್ಯನಾಥೇಶ್ವರ ಕ್ಷೇತ್ರಕ್ಕೆ 2000 ವರ್ಷಗಳ ಇತಿಹಾಸವಿದೆ. ಈ ಕ್ಷೇತ್ರದ ಹಿನ್ನೆಲೆ ವಿಶಿಷ್ಟವಾಗಿದೆ. ವೈದ್ಯನಾಥಪುರ ಹಿಂದೆ ಕಾಡು ಪ್ರದೇಶವಾಗಿತ್ತು. ಈ ಪ್ರದೇಶವನ್ನು ಅಳುತ್ತಿದ್ದ ರಾಜನಿಗೆ ಸೇರಿದ ಗೋಶಾಲೆಯಲ್ಲಿನ ಹಸುವೊಂದು ಹಾಲು ಕೊಡುತ್ತಿರಲಿಲ್ಲ.

ಅದಕ್ಕೆ ಏನು ಕಾರಣ ಎಂದು ತಿಳಿಯಲು ರಾಜ ತನ್ನ ಸೈನಿಕರಿಗೆ ಹೇಳಿದ. ಮೇಯಲು ಹೋಗಿದ್ದ ಹಸು ಗೋಶಾಲೆಗೆ ಬರುವ ದಾರಿಯಲ್ಲಿ ಒಂದು ಹುತ್ತದ ಮೇಲೆ ಬಳಿ ನಿಂತು ಹಾಲು ನೀಡಿ ಬರುತ್ತಿತ್ತು. ಇದನ್ನು ತಿಳಿದ ರಾಜ ಹುತ್ತವನ್ನು ಒಡೆದು ಹಾಕುವಂತೆ ತನ್ನ ಸೈನಿಕರಿಗೆ ತಿಳಿಸಿದ. ಹುತ್ತ ಒಡೆದಾಗ ಗುದ್ದಲಿಯ ಪೆಟ್ಟು ತಗುಲಿ ಒಳಗಿದ್ದ ಶಿವನ ಹಣೆಗೆ ಗಾಯವಾಗಿ ರಕ್ತ ಸೋರಲು ಆರಂಭವಾಯಿತು.

ಇದನ್ನು ಕಂಡ ರಾಜ ಭಯಗ್ರಸ್ತನಾದ. ಪುರೋಹಿತರ ಸಲಹೆ ಪಡೆದ. ಶಿವನ ಹಣೆಯ ರಕ್ತ ನಿಲ್ಲಲು ಪುರೋಹಿತರು ಒಂದು ಪರಿಹಾರವನ್ನು ಸೂಚಿಸಿದರು. ವಿಷಾಪಹಾರಿ ಸೊಪ್ಪನ್ನು ತಂದು ಶಿವನ ಹಣೆಗೆ ಹಚ್ಚಿದನಂತರ ರಕ್ತ ನಿಂತಿತು. ನಂತರ ಶಿವ ವೈದ್ಯನಾಥನಾಗಿ ಅಲ್ಲೇ ಸ್ಥಿರವಾಗಿ ನೆಲೆ ನಿಂತ ಎಂಬ ಐತಿಹ್ಯವಿದೆ.

ವೈದ್ಯನಾಥನ ಮಹಿಮೆ: ರಾಜ ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದ. ದೇವಸ್ಥಾನದ ಒಳಭಾಗದಲ್ಲಿ ವೈದ್ಯನಾಥನ ತಂಗಿ ಭೀಮನಕೆರೆ ಬೆಟ್ಟದಮ್ಮ, ದ್ವಾರಪಾಲಕ ನಂದಿ, ಭೃಂಗಿಯರನ್ನು ಸ್ಥಾಪಿಸಲಾಗಿದೆ. ಸುತ್ತ ಅರಕೇಶ್ವರ, ಮರಳೇಶ್ವರ, ಪಾತಾಳೇಶ್ವರ ಗುಡಿಗಳನ್ನು ನಿರ್ಮಿಸಲಾಗಿದೆ. ಶಿಂಷಾ ನದಿ ದಡದಲ್ಲಿ ಮಲ್ಲಿಕಾರ್ಜುನನನ್ನು ಪ್ರತಿಷ್ಠಾಪಿಸಲಾಗಿದೆ.

ಕಾರ್ತಿಕ ಸೋಮವಾರಗಳಂದು ವಿಶೇಷ ಪೂಜೆ ನಡೆಯುತ್ತವೆ. ಶಿವರಾತ್ರಿ ಒಂದು ವಾರ ಇರುವಾಗಲೇ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರಾವಣ ಮಾಸ ಹಾಗೂ ಸಾಮಾನ್ಯ ಸೋಮವಾರಗಳು ಹಾಗೂ ಎಲ್ಲಾ ಹಬ್ಬಗಳ ಸಂದರ್ಭದಲ್ಲಿ ವಿಶೆಷ ಪೂಜೆ ನಡೆಯುತ್ತವೆ.

ವೈದ್ಯನಾಥಪುರ ಮಂಡ್ಯದಿಂದ 23 ಕಿ.ಮೀ ದೂರದಲ್ಲಿದೆ. ಮದ್ದೂರಿನಿಂದ 3 ಕಿ.ಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನದ ವೇಳೆ ಉಚಿತ ಅನ್ನ ದಾಸೋಹದ ವ್ಯವಸ್ಥೆ ಇದೆ. ಸಮೀಪದ ಮದ್ದೂರಿನಲ್ಲಿ ಹೊಟೇಲ್ ಹಾಗೂ ಲಾಡ್ಜುಗಳಿವೆ. ದೇವಸ್ಥಾನ ಸಮೀಪ ಕೆಲ ಕೊಠಡಿಗಳಿವೆ. ಅಲ್ಲಿ ಕೆಲವರು ತಂಗಲು ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್: 9535369131. ಸೇವಾ ವಿವರ: ರುದ್ರಾಭಿಷೇಕ- 250 ರೂ ಪಂಚಾಮೃತ ಅಭಿಷೇಕ- 150 ರೂ ಕ್ಷೀರಾಭಿಷೇಕ- 101 ರೂ

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *