ಹೊರಗಿನಿಂದ ಬೂದು-ಹಸಿರುಮಿಶ್ರಿತ ಸಿಪ್ಪೆ ಹೊಂದಿದ್ದರೂ ಒಳಗಣ ತಿರುಳು ಕೇಸರಿ ಅಥವಾ ಕಿತ್ತಳೆ ಬಣ್ಣ ಹೊಂದಿರುವ ಕೇಸರಿ ಕರಬೂಜ (Muskmelon) ಬೇಸಿಗೆಯ ಫಲವಾಗಿದ್ದು ಇತರ ಕರಬೂಜ ಹಣ್ಣುಗಳಂತೆಯೇ ಸಿಹಿಯಾದ ಮತ್ತು ಹೆಚ್ಚು ನೀರಿನಂಶವನ್ನು ಹೊಂದಿರುವ ಹಣ್ಣಾಗಿದೆ. ಕಲ್ಲಂಗಡಿಯಂತೆಯೇ ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು.
ಅಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುವ ಈ ಹಣ್ಣು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೂ ಉತ್ತಮ ಆಯ್ಕೆಯಾಗಿದೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುವ ಮೂಲಕ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ.
ಇದರಲ್ಲಿ ಕರಗುವ ನಾರು, ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಹಾಗೂ ಇತರ ಪ್ರಮುಖ ಪೋಷಕಾಂಶಗಳಿವೆ. ಈ ಕರಬೂಜ ಹಣ್ಣು ರುಚಿಕರ ಮಾತ್ರವಲ್ಲ, ಇದರ ವಿಶಿಷ್ಟ ಪರಿಮಳವೂ ಎಲ್ಲರ ಮನ ಸೆಳೆಯುತ್ತದೆ ಹಾಗೂ ಈ ಹಣ್ಣನ್ನು ಅಡುಗೆಯಲ್ಲಿ ಬಳಸಿದಾಗಲೂ ಈ ಪರಿಮಳ ಆಹಾರದಿಂದ ಹೊಮ್ಮುತ್ತಾ ಆಹಾರವನ್ನು ಇನ್ನಷ್ಟು ರುಚಿಕರವಾಗಿಸುತ್ತವೆ. ಇದರ ಅಪಾರ ಪ್ರಯೋಜನಗಳಲ್ಲಿ ಪ್ರಮುಖವಾದ ಇಪ್ಪತ್ತು ಪ್ರಯೋಜನಗಳು ನಿಮ್ಮನ್ನು ಖಂಡಿತವಾಗಿಯೂ ಚಕಿತಗೊಳಿಸಲಿವೆ.
ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ: ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಮತ್ತು ಸಿ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶಗಳಾಗಿದ್ದು ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು ನೆರವಾಗುತ್ತವೆ. ವಿಶೇಷವಾಗಿ ಈ ಪೋಷಕಾಂಶಗಳು ಕಣ್ಣಿನ ಪಾಪೆಯನ್ನು ಇನ್ನಷ್ಟು ಬಲಪಡಿಸುವ ಮೂಲಕ ಸ್ಪಷ್ಟವಾದ ದೃಷ್ಟಿ ಮತ್ತು ನೋಟವನ್ನು ಉತ್ತಮಗೊಳಿಸುತ್ತವೆ.
ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ ಹಾಗೂ ಅಧಿಕ ರಕ್ತದೊತ್ತಡವನ್ನು ಕಡಿಮೆಯಾಗಿಸಲು ನೆರವಾಗುತ್ತದೆ.
ಇದರಲ್ಲಿ ಅತಿ ಕಡಿಮೆ ಪರ್ಯಾಪ್ತ ಕೊಬ್ಬು ಹಾಗೂ ಅತಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ತೂಕ ಏರದಿರಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರು ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸಿ ಹೊಟ್ಟೆಯ ಹಸಿವಿನ ಭಾವನೆ ಬರದಂತೆ ನೋಡಿಕೊಳ್ಳುತ್ತದೆ. ತನ್ಮೂಲಕ ಸೇವಿಸಬಹುದಾಗಿದ್ದ ಆಹಾರಸೇವನೆಯಿಂದ ತಡೆದು ತೂಕ ಏರದಂತೆ ಪರೋಕ್ಷವಾಗಿ ನೆರವಾಗುತ್ತದೆ.
ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ: ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಅಡಿನೋಸಿನ್ ಎಂಬ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣವಿರುವ ಕಾರಣ ರಕ್ತ ತೆಳುವಾಗಿರಲು ಹಾಗೂ ರಕ್ತನಾಳಗಳಲ್ಲಿ ಸರಾಗವಾಗಿ ಸಂಚರಿಸಲು ನೆರವಾಗುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಈ ಮೂಲಕ ಬರಬಹುದಾಗಿದ್ದ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ. ಈ ಹಣ್ಣಿನ ನಿಯಮಿತ ಸೇವನೆಯಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸಬಹುದು. ಈ ಅದ್ಭುತ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆ ಹೊಂದಿದ್ದು ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಪ್ರಮುಖ ಕಾರಣವಾಗಿದೆ. ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳನ್ನು ಉತ್ಪತ್ತಿಸಲು ಪ್ರಚೋದನೆ ದೊರಕುತ್ತದೆ. ಬಿಳಿರಕ್ತಕಣಗಳು ನಮ್ಮ ದೇಹವನ್ನು ರೋಗಾಣುಗಳಿಂದ ರಕ್ಷಿಸುವ ಸೈನಿಕರಾಗಿದ್ದು ಈ ಸೈನ್ಯ ಬಲವಾಗಿದ್ದಷ್ಟೂ ವೈರಿಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಹಲವಾರು ಸೋಂಕುಗಳಿಂದ ರಕ್ಷಣೆ ಪಡೆಯುವಂತಾಗುತ್ತದೆ.
ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನೀರಿನಂಶ ಹೊಟ್ಟೆಯ ಒಳಪದರದ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಹೊಟ್ಟೆಯ ಉರಿಯನ್ನು ಇಲ್ಲವಾಗಿಸುತ್ತದೆ.
ಮಲಬದ್ಧತೆಯಿಂದ ರಕ್ಷಿಸುತ್ತದೆ. ಇದರಲ್ಲಿ ನೀರು ಮತ್ತು ಕರಗುವ ನಾರು ಅತ್ಯಂತ ಸಂತುಲಿತ ಅನುಪಾತದಲ್ಲಿವೆ. ಇದು ಮಲಬದ್ಧತೆಯ ತೊಂದರೆಯನ್ನು ಇಲ್ಲವಾಗಿಸಲು ಸೂಕ್ತವಾಗಿದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಜೀರ್ಣಕ್ರಿಯೆಯ ತೊಂದರೆಗಳನ್ನು ನೈಸರ್ಗಿಕವಾಗಿ ಗುಣಪಡಿಸುತ್ತದೆ.
ಕ್ಯಾನ್ಸರ್ ಬರುವುದರಿಂದ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುವ ಕ್ಷಮತೆ ಹೊಂದಿದ್ದು ಈ ಮೂಲಕ ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಈ ಹಾನಿ ಮುಂದುವರೆದರೆ ಕ್ಯಾನ್ಸರ್ ಗೂ ತಿರುಗಬಹುದು. ಈ ಮೂಲಕ ಕರಬೂಜದ ಹಣ್ಣು ಕ್ಯಾನ್ಸರ್ ಬರುವುದರಿಂದಲೂ ರಕ್ಷಣೆ ಒದಗಿಸುತ್ತದೆ.
ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ. ಈ ಹಣ್ಣಿನಲ್ಲಿರುವ ಆಕ್ಸಿಕೈನ್ ಎಂಬ ಪೋಷಕಾಂಶಕ್ಕೆ ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ನಿವಾರಿಸುವ ಶಕ್ತಿ ಇದೆ. ಕೇಸರಿ ಕರಬೂಜ ಹಣ್ಣಿನ ನಿಯಮಿತ ಸೇವನೆಯಿಂದ ಮೂತ್ರಪಿಂಡಗಳಲ್ಲಿರುವ ಕಲ್ಮಶಗಳು ನಿವಾರಣೆಯಾಗುವ ಮೂಲಕ ಇಲ್ಲಿ ಇನ್ನಷ್ಟು ಕಲ್ಲುಗಳಾಗುವುದರಿಂದ ರಕ್ಷಿಸುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.