ಹಲವು ಗಣ್ಯಾತಿ ಗಣ್ಯರು ಭೇಟಿ ನೀಡುವ ಪವರ್ ಫುಲ್ ಸೂರ್ಯದೇವ ಮತ್ತು ಆಂಜನೇಯಸ್ವಾಮಿ ದೇವಸ್ಥಾನದ ವಿಶೇಷ ಏನು ಗೊತ್ತಾ..!

Hit

ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ಸಾಗಿ ನೆಲಮಂಗಲ ದಾಟಿದ ಮೇಲೆ ಸಿಗುವ ಟಿ ಬೇಗೂರು ಎಂಬಲ್ಲಿ ಬಲಕ್ಕೆ ತಿರುಗಿ ತ್ಯಾಮಗೊಂಡ್ಲು, ಮುದ್ದಲಿಂಗನಹಳ್ಳಿ ರೈಲ್ವೆ ಗೇಟ್, ಮಣ್ಣೇ, ಕೊಳಾಲ ಮಾರ್ಗವಾಗಿ ಸುಮಾರು ೬೦ ಕಿಮಿ ಸಾಗಿದ್ದಲ್ಲಿ ಎದುರಾಗುತ್ತದೆ ಈ ಸೂರ್ಯಪುರ ದೇಗುಲ. ಸುಮಾರು ೬೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇಗುಲವು ವಿಜಯನಗರ ಅರಸರ ಕಾಲದಲ್ಲಿ ರಾಯಪುರವೆಂದು ಕರೆಯಲ್ಪಟ್ಟಿತ್ತು. ಇತ್ತೀಚಿನ ದಿನಗಳವರೆಗೂ ಹೆಚ್ಚು ಬೆಳಕಿಗೆ ಬಾರದ ಈ ದೇಗುಲವು ೧೯೯೯ರಲ್ಲಿ ಶ್ರೀ ಸೂರ್ಯಂಜನೆಯ ಚಾರಿಟಬಲ್ ಟ್ರಸ್ಟ್ ಆದ ಬಳಿಕ ಜೀರ್ಣೋದ್ಧಾರಗೊಂಡಿದೆ.

೨೦೦೬ ನೇ ಇಸವಿಯಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ಸೂರ್ಯ ದೇವನನ್ನೊಳಗೊಂಡ, ಆ ಭಗವಾನ್ ಸೂರ್ಯನಿಗೆ ನಮಿಸುತ್ತಿರುವ ಕಪ್ಪು ಶಿಲೆಯ ಆಂಜನೇಯ ಸ್ವಾಮಿಯನ್ನು ಹೊಸದಾಗಿ ಪ್ರತಿಷ್ಠಾಪಿಸಲಾಗಿದೆ. ಕಾಕತಾಳೀಯವೆಂಬಂತೆ ಈ ದೇಗುಲ ಪ್ರತಿಷ್ಠಾಪನೆಯಾದ ವರ್ಷವೇ ಕೆರೆಯ ಕೋಡಿಯಲ್ಲಿದ್ದ ಪುರಾತನ ಆಂಜನೇಯ ಸ್ವಾಮಿಯ ಧ್ವಜಸ್ತಮಭವು ಬಿದ್ದುಹೋಯಿತು. ಅಂದಿನಿಂದ ಸೂರ್ಯಪುರದ ಈ ಸೂರ್ಯಆಂಜನೇಯ ಸ್ವಾಮಿಯು ಸ್ಥಳೀಯರ ಹಾಗು ಸಹಸ್ರಾರ ಭಕ್ತರ ಆರಾಧ್ಯ ದೈವವಾಯಿತು.

ಮೊದಲ ನೋಟದಲ್ಲೇ ಸರ್ವಭಕ್ತರನ್ನು ತನ್ನ ಭಕ್ತಿಯ ಪರಾಕಾಷ್ಠಾದೆಡೆಗೆ ಸೆಳೆಯುವ ಈ ಸೂರ್ಯಂಜನೆಯ ಸ್ವಾಮಿಯು ಬೇಡಿದ್ದನ್ನು ನೀಡುವ, ಕಣ್ಣಿನ ಖಾಯಿಲೆಗಳು, ಚರ್ಮರೋಗ ಹೃದ್ರೋಗಗಳಿಗೆ ಪರಿಹಾರ ನೀಡುವುದರ ಜೊತೆಗೆ ಆರೋಗ್ಯ, ಸುಖ ಶಾಂತಿ ನೆಮ್ಮದಿಯನ್ನು ಕರುಣಿಸುವ, ಶತ್ರುಭಾದೆಯನ್ನು ಹೋಗಲಾಡಿಸುವ ಮಹಾಮಹಿಮ ಕ್ಷೇತ್ರವಾಗಿ ಬೆಳೆಯುತ್ತಿದೆ.

ಪ್ರತಿ ಭಾನುವಾರ, ಮಂಗಳವಾರ ಹಾಗು ಶನಿವಾರಗಳಂದು ಈ ಸೂರ್ಯಆಂಜನೇಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರಗುತ್ತವೆ. ಬರುವ ಭಕ್ತರಿಗೆ ನಿತ್ಯವೂ ಇಲ್ಲಿ ಊಟದ ಪ್ರಸಾದವು ಲಭಿಸುತ್ತದೆ.ಹಾಗು ಉಳಿದುಕೊಳ್ಳಲು ವಸತಿಗ್ರಹಗಳ ಅನುಕೂಲವೂ ಇದೆ. ನಿತ್ಯ ಬೆಳಿಗ್ಗೆ ೬ ರಿಂದ ರಾತ್ರಿ ೭.೩೦ ವರೆಗೂ ತೆರೆದಿರುವ ಈ ದೇಗುಲದಲ್ಲಿ ನವಗ್ರಹ ವನ, ರಾಶಿವನ, ನಕ್ಷತ್ರವನಗಳಿರುವುದು ಮತ್ತೊಂದು ವೈಶಿಷ್ಟ್ಯ.

ಈ ಸನ್ನಿಧಿಗೆ ಗೊರವನಹಳ್ಳಿ, ಕ್ಯಾಮೇನಹಳ್ಳಿ, ದೇವರಾಯನದುರ್ಗ, ನಾಮದ ಚಿಲುಮೆ, ಸಿದ್ದರ ಬೆಟ್ಟಗಳು ಹತ್ತಿರದಲ್ಲಿದ್ದು ಸ್ವಂತ ವಾಹನವಿದ್ದರೆ ಒಂದೇ ದಿನದಲ್ಲಿ ಎಲ್ಲ ಸ್ಥಳಗಳನ್ನು ನೋಡಬಹುದು. ತ್ಯಾಮಗೊಂಡ್ಲು ಹಾಗು ಕೋಳಾಲದಿಂದ ಆಟೋರಿಕ್ಷಾ ಸೌಲಭಗಳಿವೆ. ಮೊದಲು ಸೂರ್ಯಪುರದ ಬೆಟ್ಟದ ಮೇಲಿರುವ ಪ್ರಥಮ ಪೂಜಿತ ಗಣಪತಿಯನ್ನು ದರ್ಶನ ಮಾಡಿ ನಂತರ ಸೂರ್ಯ ಆಂಜನೇಯನ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಹನುಮ ಜಯಂತಿ, ಶ್ರವಣ ಶನಿವಾರಗಳಂದು ವಿಶೇಷ ಪೂಜಾ ಕೈಂಕರ್ಯಗಳು, ಅಲಂಕಾರಗಳು ದೂರದೂರುಗಳಿಂದ ಬರುವ ಭಕ್ತರ ಹೃನ್ಮನಗಳನ್ನು ತಣಿಸುತ್ತವೆ.

ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ (ರಥಸಪ್ತಮಿ) ದಿವಸ ಶ್ರೀ ಸೂರ್ಯಾಂಜನೇಯ ಸ್ವಾಮಿ ರಥೋತ್ಸವ ಜರುಗುತ್ತದೆ. ಶ್ರೀ ಕ್ಷೇತ್ರ ಸೂರ್ಯಪುರ ಸಂಪೂರ್ಣ ವಾಸ್ತು ರೀತಿಯಲ್ಲಿ ಕೂಡಿರುವುದರಿಂದ ಭಕ್ತರ ಎಲ್ಲಾ ಕೋರಿಕೆಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಭಕ್ತಾದಿಗಳು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ. ನಾಮಕರಣ, ಮದುವೆ, ಮುಂತಾದ ಶುಭ ಸಮಾರಂಭಗಳನ್ನು ನೆರವೇರಿಸಲು ಸಮುದಾಯ ಭವನ ಲಭ್ಯವಿದೆ.

ಶ್ರೀ ಕ್ಷೇತ್ರದಲ್ಲಿ ನವಗ್ರಹವನ, ನಕ್ಷತ್ರವನ, ಹಾಗೂ ರಾಶಿವನ ಇದ್ದು ಭಕ್ತರು ತಮ್ಮ ನಕ್ಷತ್ರ ,ರಾಶಿಗೆ ಅನುಗುಣವಾಗಿ ಆ ವೃಕ್ಷದ ಬಳಿ ಪ್ರಾರ್ಥನೆ ಸಲ್ಲಿಸಬಹುದು. ಭಕ್ತರು ತಮ್ಮ ಹರಕೆ ತೀರಿಸಲು ಶ್ರೀ ಸೂರ್ಯಾಂಜನೇಯ ಸ್ವಾಮಿ ಉತ್ಸವಮೂರ್ತಿಯನ್ನು ತೆಗೆದುಕೊಂಡು ಹೋಗಲು ದೇವಾಲಯದ ವಾಹನ ಕೂಡ ಲಭ್ಯವಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *